ಮರಳು ದಂಧೆಯ ಕಣಕಣದಲ್ಲಿಯೂ ಹಣದ ಹೊಳೆ

 ಅಕ್ರಮಕ್ಕೆ ಜಿಲ್ಲಾಡಳಿತವೇ ಹೊಣೆ ಸ್ಪಷ್ಟ ನೀತಿ ನಿಯಮಾವಳಿಗಳನ್ನು ತರದೇ ವಿಫಲವಾದ ಸರ್ಕಾರಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ ಭ್ರಷ್ಟಾಚಾರ ಅಕ್ರಮಗಳ ಹೊಣೆ ಹೊರಬೇಕಾದ ಜನಪ್ರತಿನಿಧಿಗಳ ಕರ್ತವ್ಯವೇನು?




ಮರಳು ದಂಧೆಯ ಅಕ್ರಮಗಳ ಬಗ್ಗೆ ಬರೆಯಿರಿ ಎಂದ ಅನೇಕ ಓದುಗರ ಮನವಿಯ ಹಿನ್ನೆಲೆಯಲ್ಲಿ ಮರಳು ಮಾಫಿಯಾದ ಅಸಲಿ ಯತ್ತೇನು ಎಂದು ತಿಳಿದುಕೊಳ್ಳಲು ಶರಾವತಿ ನದಿ ಪಾತ್ರದಲ್ಲಿ ಸುಮಾರು ೨೦ ಕಿ.ಮೀ. ವ್ಯಾಪ್ತಿಯಲ್ಲಿ ಸಂಚರಿಸಿ ಸಂಗ್ರಹಿಸಿ ಮಾಹಿತಿಗಳನ್ನು ನೀಡು ತ್ತಿದ್ದೇನೆ.

ಮರಳು ದಂಧೆಯ ಅನೇಕ ಮುಖಗಳನ್ನು ಕಂಡಾಗ ಮರಳು ಮಾಫಿಯಾಕ್ಕೆ ಜನಪ್ರತಿನಿಧಿಗಳೇ ಕಾರಣ ಎಂಬ ಅಂಶ ಕಂಡು ಬರುತ್ತದೆ. ಶರಾವತಿ ನದಿಯ ಹಿನ್ನೀರು ಕಡಿಮೆಯಾಗುತ್ತಿದ್ದಂತೆ ಮರಳು ತೆಗೆಯುವ ವ್ಯವಹಾರ ಮತ್ತಷ್ಟು ಹೆಚ್ಚಾಗುತ್ತಾ ಹೋಗುತ್ತದೆ.

ಬಿಳ್ಳೋಡಿಯಿಂದ ನಾಗರ ಕೊಡಿಗೆಯವರೆಗೆ ಸುಮಾರು ೨೦ ಕಿ.ಮಿ. ಹೊಳೆಯ ಅಕ್ಕಪಕ್ಕ ಮರಳು ತೆಗೆಯುತ್ತಿದ್ದಾರೆ. ಈ ಮರಳು ತೆಗೆಯಲು ಉತ್ತರ ಪ್ರದೇಶದಿಂದ ಸುಮಾರು ೫೦೦ಕ್ಕೂ ಹೆಚ್ಚು ಕೆಲಸಗಾರರು ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ದಿನ ಬೆಳಿಗ್ಗೆಯಿಂದ ಹೊಳೆಯಲ್ಲಿ ಮುಳುಗಿ ಮರಳು ಎತ್ತುತ್ತಿದ್ದಾರೆ. ಗಾಳಿ ತುಂಬಿದ ಲಾರಿಯ ಟ್ಯೂಬ್‌ಗೆ ದಾರ ಕಟ್ಟಿ ನೀರಿನಲ್ಲಿ ತೇಲಿಸುತ್ತಾ ದಡಕ್ಕೆ ಬುಟ್ಟಿಗಳಲ್ಲಿ ತಂದು ದಡದಲ್ಲಿ ರಾಶಿ ಹಾಕಿ ನಂತರ ಅದನ್ನು ರಾತ್ರಿ ಲಾರಿಯಲ್ಲಿ ಪಿಕಪ್ ಗಾಡಿಗಳಲ್ಲಿ ಸಾಗಿಸುತ್ತಾರೆ.




ಸುಮಾರು ಹೊಸನಗರ ತಾಲ್ಲೂಕಿನಲ್ಲಿಯೇ ೫೦ ರಿಂದ ೬೦ ಲಾರಿಗಳು ದಿನಾ ೧ ಲೋಡ್ ಮರಳು ಸಾಗಿಸಿದರೆ ಹೆಚ್ಚು. ಏಕೆಂದರೆ ಈ ಲಾರಿಗಳು ರಾತ್ರಿ ಮಾತ್ರ ಸಂಚರಿಸುತ್ತವೆ. ಹಗಲು ಮರಳು ಸಂಗ್ರಹ ರಾತ್ರಿ ಸಾಗಾಣಿಕೆ. ಈ ವ್ಯವಹಾರ ಕಳ್ಳ ವ್ಯಾಪಾರವಾಗಿದೆ. ಮತ್ತು ಈ ರೀತಿ ಮರಳು ಸಾಗಿಸುವವರನ್ನು ಮರಳು ಕಳ್ಳರು ಎನ್ನುತ್ತಾರೆ. ಆದರೆ ವಾಸ್ತವದಲ್ಲಿ ಅದೇ ಜನರು ಮತ್ತು ಸರ್ಕಾರಿ ಅಭಿವೃದ್ಧಿ ಕೆಲಸಗಳಿಗೆ ಅವರಿಂದಲೇ ಮರಳು ಅವರು ಹೇಳಿದ ದರಕ್ಕೆ ಖರೀದಿಸುತ್ತಾರೆ.

ಮರಳು ಎಲ್ಲರಿಗೂ ಬೇಕು. ಮನೆ, ಶಾಲೆ, ಸರ್ಕಾರಿ ಕಟ್ಟಡಗಳು ಹೀಗೆ ಎಲ್ಲಾ ಕಾಮಗಾರಿಗಳಿಗೂ ಮರಳು ಬೇಕೆ ಬೇಕು. ಆದರೆ ಅದನ್ನು ಕಾನೂನುಬದ್ದವಾಗಿ ಮಾಡಿದರೆ ಮರಳು ಸಾಗಾಣಿಕೆದಾರರಿಗೂ ಅಪವಾದ ಇರಲಿಲ್ಲ. ಸರ್ಕಾರದ ಬೊಕ್ಕಸಕ್ಕೂ ಆದಾಯ ಬರುತ್ತಿತ್ತು.

ಆದರೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಕಾನೂನು ಸರಿಯಾಗಿ ಮಾಡದೇ ಅಕ್ರಮ ದಂಧೆಗೆ ಅವಕಾಶ ನೀಡಿ ಅಧಿಕಾರಿಗಳಿಗೆ ಅಕ್ರಮ ಹಣ ಸಂಗ್ರಹಣೆಗೆ ಅವಕಾಶ ಮಾಡಿಕೊಟ್ಟಿದೆ.

ಒಂದೊAದು ಲಾರಿಯವರು ಪ್ರತಿ ತಿಂಗಳು ೨೫-೩೦ ಸಾವಿರ ಅಧಿಕಾರಿಗಳ ಜೇಬಿಗೆ ಲಂಚದ ಹಣಕೊಟ್ಟು ಮರಳು ಸಾಗಾಣಿಕೆ ಮಾಡಬೇಕಾದ ಪರಿಸ್ಥಿತಿಯನ್ನು ಜಿಲ್ಲಾಡಳಿತ ಮತ್ತು ಸರ್ಕಾರವೇ ಮಾಡಿದೆ.

ಸರ್ಕಾರ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನ, ಹೊಣೆಗೇಡಿತನದ ತಪ್ಪು ನಿರ್ಧಾರಗಳು ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಆಗಾಗ ಪತ್ರಿಕೆಗಳಲ್ಲಿ ಅಕ್ರಮ ಮರಳು ದಂಧೆ ಎಂಬ ಸುದ್ದಿ ಬರುತ್ತದೆಯೇ ವಿನಃ ಆದರೆ ಯಾರು ಹೊಣೆ ಎಂಬ ತನಿಖಾ ವರದಿಗಳು ಬರುತ್ತಿಲ್ಲ.

ಪಶ್ಚಿಮಘಟ್ಟ ಮತ್ತು ಮರಳು

ಪಶ್ಚಿಮಘಟ್ಟ ಪ್ರದೇಶ ಎಂದರೆ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಮತ್ತು ಗುಡ್ಡಗಾಡು ಪ್ರದೇಶವಾಗಿದೆ. ಇಲ್ಲಿ ಭೂ ಸವಕಳಿ ಹೆಚ್ಚಾಗಿರುತ್ತದೆ. ಪ್ರತಿ ವರ್ಷ ಮಳೆಗಾಲ ಮುಗಿಯುವಾಗ ಸರಿಸುಮಾರು ಹೊಳೆ ಚಿಕ್ಕ ಪುಟ್ಟ ಹಳ್ಳಗಳಲ್ಲಿಯೂ ೪ ರಿಂದ ೬ ಅಡಿ ಮರಳು ಸಂಗ್ರಹವಾಗುತ್ತದೆ. ಈ ಮರಳು ಗುಡ್ಡಗಳಲ್ಲಿ ಮಳೆ ಬಿದ್ದಾಗ ಮಣ್ಣು ಸವಕಳಿಯಲ್ಲಿ ಉಂಟಾಗುತ್ತದೆ. ಅದನ್ನು ಬಳಸಿಕೊಳ್ಳದೇ ಬಿಟ್ಟರೆ ಅನೇಕ ತಗ್ಗು ಪ್ರದೇಶಗಳು ಮರಳು ಭೂಮಿ ಯಾಗುತ್ತದೆ. ಅಲ್ಲಿ ಉತ್ತಮ ಬೆಳೆ ಸಹಾ ಬರುವುದಿಲ್ಲ. ಇನ್ನೊಂದು ರೀತಿಯಲ್ಲಿ ಶರಾವತಿ ನದಿಗೆ ಆಣೆಕಟ್ಟು ಕಟ್ಟಿದ್ದು ಈ ಆಣೆಕಟ್ಟಿಗೆ ಈ ಮರಳು ಸೇರಿಕೊಳ್ಳುತ್ತಾ ಹೂಳು ತುಂಬಿಕೊAಡು ಶರಾವತಿ ಆಣೆಕಟ್ಟಿನಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗುತ್ತಾ ಹೋಗುತ್ತದೆ.

ಪರಿಸರವಾದಿಗಳ ಪುಕ್ಕಟ್ಟೆ ವಾದಗಳು

ಕೆಲವು ಪರಿಸರವಾದಿಗಳ ಹೆಸರಿನಲ್ಲಿ ಮಲೆನಾಡಿನಲ್ಲಿ ಏನು ಅಭಿವೃದ್ಧಿಯಾಗ ಬಾರದು ಎನ್ನುವ ರೀತಿ ವರ್ತಿಸುತ್ತಾರೆ. ಬಾವಿಯೊಳಗಿನ ಕಪ್ಪೆಗಳಂತೆ ವಾದ ಮಾಡುವ ಪರಿಸರವಾದಿಗಳು ಮಲೆನಾಡಿನ ಅಧ್ಯಯನವನ್ನಾಗಲಿ, ಭೂಮಿಯ ಅಧ್ಯಯನವನ್ನಾಗಲಿ ಮಾಡದೇ ಪತ್ರಿಕೆಗಳಲ್ಲಿ ತಮ್ಮ ಹೆಸರು ಬರಬೇಕು ಎಂಬ ಹುಚ್ಚಿಗೆ ಬಿದ್ದಂತೆ ಬೊಬ್ಬೆ ಹಾಕುತ್ತಿರುತ್ತಾರೆ. ಈ ಪರಸರವಾದಿಗಳು ಒಳ್ಳೆಯ ಆರ್.ಸಿ.ಸಿ. ಮನೆಯಲ್ಲಿ ಅಂಗಳಕ್ಕೂ ಮಾರ್ಬಲ್, ಕಡಪಾಕಲ್ಲು ಹಾಕಿಸಿಕೊಂಡಿರುತ್ತಾರೆ. ಅವರ ಅಪ್ಪ ಮಾಡಿದ ಆಸ್ತಿಯಲ್ಲಿ ಸುಖವಾಗಿ ಕುಳಿತು ಬೇರೆಯರ‍್ಯಾರು ತಮ್ಮ ಮಟ್ಟಕ್ಕೆ ಬೆಳೆಯಬಾರದು ಎಂಬ ಸಿದ್ದಾಂತದಲ್ಲಿ ಮಾತನಾಡುತ್ತಾರೆ. ಮಲೆನಾಡಿನಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಇಲ್ಲಿನ ಭೂಸವಕಳಿಯ ಮರಳು ತುಂಬುತ್ತಾ ಹೋದರೆ ಅದು ಹೋಗಿ ನದಿ ಪಾತ್ರದ ಭೂಮಿಗಳಿಗೆ ಅಪಾಯಕಾರಿ ಯಾಗುತ್ತದೆ. ಎಷ್ಟೊ ಸಾರಿ ನದಿಪಾತ್ರದ ಭೂಮಿಗಳಲ್ಲಿ ತೋಟ ಗದ್ದೆಗಳಲ್ಲಿ ೨-೩  ಅಡಿ ಮರಳು ಬಂದು ನಿಲ್ಲುತ್ತದೆ. ಅದು ನದಿಪಾತ್ರದ ಜನರಿಗೆ ಅದರ ನೋವು ತಿಳಿದಿದೆ.

ಮರಳು ದಂಧೆಯಲ್ಲಿ ಊರು ಇಬ್ಬಾಗ

ಮರಳು ದಂಧೆಯಲ್ಲಿ ಪ್ರತಿ ಊರುಗಳಲ್ಲಿಯೂ ಪರ ಮತ್ತು ವಿರೋಧದ ಹೋರಾಟಗಳು ನಡೆಯುತ್ತದೆ. ನಮ್ಮ ರಸ್ತೆ ಹಾಳಾಗುತ್ತಿದೆ ಎನ್ನುವವರೇ ಹೆಚ್ಚು. ಅವರ ನಡುವೆ ಮರಳು ತೆಗೆಯಲು ತಮ್ಮ ಗದ್ದೆ ತೋಟಗಳ ಮಧ್ಯೆ ರಸ್ತೆ ನಿರ್ಮಿಸಿ ಕೊಂಡು ಹೊಳೆಗೆ ಹೋಗಲು ಅವಕಾಶ ಮಾಡಿಕೊಟ್ಟ ಕುಟುಂಬಗಳು ಮರಳು ಲೊಡಿಗೆ ೫೦೦-೧೦೦೦ ರೂ. ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ನದಿಪಾತ್ರದ ಕುಟುಂಬಗಳು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಅದನ್ನು ಸಹಿಸಲಾಗದ ಕೆಲವರು ಬೊಬ್ಬೆ ಹಾಕುತ್ತಾ ಪರಿಸರವಾದಿಗಳ ಮೊರೆ ಹೋಗುತ್ತಿದ್ದಾರೆ. ಈ ಪರಿಸರವಾದಿಗಳು ಅದೇ ಅವಕಾಶಕ್ಕಾಗಿ ಕಾದು ಕುಳಿತಿರುತ್ತಾರೆ. ಊರಿನ ಜಗಳದಲ್ಲಿ ಪರಿಸರವಾದಿಗಳ ಕೂಗು ಮುಗಿಲು ಮುಟ್ಟಿ ಅಧಿಕಾರಿಗಳ ಹತ್ತಿರ ಹೋಗು ತ್ತದೆ. ಅಧಿಕಾರಿಗಳು ಅದರ ಸಂಪೂರ್ಣ ಲಾಭ ಪಡೆದುಕೊಂಡು ಲಾರಿಗಳಿಗೆ ಇಷ್ಟು ಲಂಚ, ಸಣ್ಣ ವಾಹನಕ್ಕೆ ಇಷ್ಟು ಎಂದು ದರ ನಿಗದಿ ಮಾಡಿ ವಸೂಲಿ ಮಾಡುತ್ತಾರೆ.

ಮರಳಿಗೆ ಯಾರ ಅಧಿಕಾರ 

ಮರಳು ಲಾರಿಗಳನ್ನು ತಡೆದು ಗಲಾಟೆ ಮಾಡಿದ ಊರಿನವರೇ ಹೇಳಿದಂತೆ ಮರಳು ನಿಯಂತ್ರಣ ಕಂದಾಯ ಇಲಾಖೆಗೆ ಬರುತ್ತದೆ ಎಂದು ತಹಶಿಲ್ದಾರರಿಗೆ ಫೋನ್ ಮಾಡಿದರೆ ನಮ್ಮ ಅಧಿಕಾರ ಅಲ್ಲ ಎನ್ನುತ್ತಾರೆ. ಪೋಲೀಸ್ ಸ್ಟೇಷನಗೆ ಫೋನ್ ಮಾಡಿದರೆ ನಮ್ಮ ಅಧಿಕಾರ ಅಲ್ಲ ಎನ್ನುತ್ತಾರೆ. ನಂತರ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಫೋನ್ ಮಾಡಿದರೆ ಅವರು ಬಾರದೇ ಲಾರಿಗಳು ಮರಳು ತುಂಬಿ ಕೊಂಡು ಹೋಗಿದ್ದಾರೆ. ಇದು ನಡೆದ ಘಟನೆ ಯಾಗಿದೆ. ಈ ರೀತಿ ಆಗಲು ಕಾರಣ ಯಾರು ಸರ್ಕಾರ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿ ತನವಲ್ಲವೇ?

ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ಅಕ್ರಮಕ್ಕೆ ಕಾರಣ ರಾಗುವುದಾದರೆ ಅಧಿಕಾರಿಗಳು ಲಂಚ ತೆಗೆದುಕೊಂಡು ಅವಕಾಶ ನೀಡುವು ದಾದರೆ ಸರ್ಕಾರದ ಹೊಣೆಗಾರಿಕೆ ಏನು?

ಸರ್ಕಾರಕ್ಕಾಗುವ ನಷ್ಟ

ಈ ಮರಳು ವ್ಯವಹಾರದಲ್ಲಿ ಈ ಹಿಂದೆ ಸರ್ಕಾರಕ್ಕೆ ಹಣ ಕಟ್ಟಿ ಪರ್ಮಿಟ್ ಕೊಟ್ಟು ಸಾಗಾಣಿಕೆಗೆ ಅವಕಾಶ ನೀಡಲಾಗಿತ್ತು. ಈಗ ಅದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಸರ್ಕಾರದ ಖಜಾನೆಗೆ ನಷ್ಟವಾಗಿ ದೆಯೇ ವಿನಃ ಬೇರೆ ಏನು ಆಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಇರುವ ತಾಲೂಕುಗಳಲ್ಲಿ ಹೊಸನಗರ ತಾಲೂಕಿನಲ್ಲಿಯೇ ಸರಿಸುಮಾರು ದಿನಕ್ಕೆ ೫೦ ರಿಂದ ೬೦ ಲಾರಿಗಳು ಮರಳು ಸಾಗಾಣಿಕೆ ಮಾಡುತ್ತಿವೆ. ಒಂದು ಲಾರಿಗೆ ೨೦೦೦ರೂ. ಶುಲ್ಕ ನಿಗದಿ ಮಾಡಿದರೂ ಒಂದು ದಿನಕ್ಕೆ ೧ ಲಕ್ಷ ರಾಯಟಿ ಬರುತ್ತದೆ. ೩೦ ದಿನಕ್ಕೆ ೩೦ ಲಕ್ಷ ಆದಾಯ. ಇಡೀ ಜಿಲ್ಲೆಯನ್ನು ತೆಗೆದುಕೊಂಡರೆ ೨ ರಿಂದ ೩ ಕೋಟಿ ಆದಾಯ ಇದನ್ನೇ ಜಿಲ್ಲೆಯ ರಸ್ತೆ ಅಭಿವೃದ್ದಿಗಳಿಗೆ ಬಳಸಬಹುದು. ಅದನ್ನು ಬಿಟ್ಟು ಅಕ್ರಮಕ್ಕೆ ಅವಕಾಶ ನೀಡಿ ಸರ್ಕಾರ ಒಳಮಾರ್ಗದಲ್ಲಿ ಅಕ್ರಮ ಪಾಲು ಪಡೆದುಕೊಳ್ಳುತ್ತಿದ್ದೆಯೇ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಾಗಿದೆ. ಇನ್ನು ಹೊಸ ನೀತಿಗಳನ್ನು ತರುತ್ತಿದ್ದಾರೆ ಎನ್ನಲಾಗುತ್ತಿ ರುವ ಮರಳು ನೀತಿಯಲ್ಲಿ ಸರ್ಕಾರ ನಿಗದಿ ಮಾಡಿದ ರಾಯಟಿ ಶುಲ್ಕ ಒಂದು ಲಾರಿಗೆ ೧೦ ರಿಂದ ೧೪ ಸಾವಿರ ಆಗುತ್ತದೆ ಎನ್ನಲಾಗುತ್ತಿದೆ. ಅದು ದುಬಾರಿ ಯಾಗುತ್ತದೆ. ಬೆಂಗಳೂರು ನಗರ ಪ್ರದೇಶಗಳಿಗೆ ಆಗಬಹುದು ಆದರೆ ಗ್ರಾಮೀಣ ಪ್ರದೇಶದಲ್ಲಿ ಮನೆ, ಇತರೆ ಕಟ್ಟಡ ಕಟ್ಟುವ ವ್ಯಕ್ತಿಗಳಿಗೆ ಒಂದು ಕಟ್ಟಡ ಯಾ ಮನೆಕಟ್ಟಲು ೬ ರಿಂದ ೮ ಲಕ್ಷ ರೂ. ಮರಳೇ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಜಿಲ್ಲಾಡಳಿತದ ಹೊಣೆ

ಪ್ರತಿಯೊಂದು ಜಿಲ್ಲಾಡಳಿತಕ್ಕೂ ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದೆ. ಜಿಲ್ಲಾಧಿಕಾರಿ ಎಂದರೆ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಹಕ್ಕು ಇರುವ ಹುದ್ದೆ. ಬ್ರಿಟಿಷರು ಮಾಡಿದ ಕಮೀಷನರ್ ಹುದ್ದೆಯ ಮಹತ್ವವೇ ಹಾಗೆ. ಒಂದು ಜಿಲ್ಲೆಗೆ ಅಗತ್ಯವಾದ ನಿರ್ಣಯ ತೆಗೆದುಕೊಳ್ಳುವ ಹಕ್ಕು ಜಿಲ್ಲಾಧಿಕಾರಿಗಳಿಗೆ ಇದೆ. ಅದನ್ನು ಉಪಯೋಗಿಸಿಕೊಳ್ಳುವಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗೆ ಜಿಲ್ಲಾ ಆಡಳಿತ ವಿಫಲವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಮರಳಿಗೆ ಇಂತಹ ಕಠಿಣ ಕ್ರಮಗಳಿಲ್ಲ ಮತ್ತು ಅವಕಾಶ ನೀಡಲಾಗಿದೆ. ಆದರೆ ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರತಿನಿಧಿಗಳೆಂಬ ಮಹಾ ಪಂಡಿತರು ಮತ್ತು ಜಿಲ್ಲಾಧಿಕಾರಿ ಸ್ಪಷ್ಟ ನಿರ್ಣಯ ತೆಗೆದುಕೊಳ್ಳದೇ ಜಿಲ್ಲೆಯ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ಹಣಬಾರದಂತೆ ಮಾಡಿ ದ್ದಾರೆ ಮತ್ತು ಅಕ್ರಮಗಳಿಗೆ ದಾರಿ ಮಾಡಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.



ಉದಾಹರಣೆಯಾಗಿ ಮುಂಬೈ-ಕಮಿಷನರ್ ವಿಭಾಗಕ್ಕೆ ಸೇರಿದ ಉತ್ತರಕನ್ನಡ ಜಿಲ್ಲೆಗೆ ಸೊಪ್ಪಿನ ಬೆಟ್ಟದ ಹಕ್ಕು ರೈತರಿಗೆ ನೀಡಲಾಗಿದೆ. ಆದರೆ ಮದ್ರಾಸ್ ಇಂದಿನ ಚೆನೈ ಪ್ರಾಂತ್ಯ ಕಮಿಷನರ್ ನಿರ್ಣಯ ದಿಂದಾಗಿ ಶಿವಮೊಗ್ಗ ಜಿಲ್ಲೆ ದಟ್ಟ ಅರಣ್ಯವಿದ್ದ ಕಾರಣ ಇಲ್ಲಿ ಬೆಳೆಗೆ ಯೋಗ್ಯವಲ ್ಲವೆಂದು ಹೇಳಿದ ಕಾರಣದಿಂದಾಗಿ ಈಗ ಅರಣ್ಯ ಇಲಾಖೆಯ ಕಿರಿಕಿರಿಗೆ ಶಿವಮೊಗ್ಗ ಜಿಲ್ಲೆಯ ರೈತರು ಜನರು ಸಿಕ್ಕಿಹಾಕಿ ಕೊಂಡಿದ್ದಾರೆ.

ಹಾಗೂ ೫ ವರ್ಷ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದೇ ಗುರಿ ಎಂದುಕೊAಡ ಜನಪ್ರತಿನಿಧಿಗಳ ಸುಜ್ಞಾನಕ್ಕೆ ಜನರೇ ಹೊಣೆಯಾಗಿದ್ದಾರೆ.

ಮರಳು ದಂಧೆಯವರ ಅಳಲು

ನಾವು ಬದುಕಿಗಾಗಿ ಉದ್ಯೋಗಕ್ಕಾಗಿ ಹೊಟ್ಟೆಪಾಡಿಗಾಗಿ ಈ ವ್ಯವಹಾರಕ್ಕೆ ಬಂದೆವು. ಸಾಲ ಮಾಡಿ ಲಾರಿ ತಂದಿದ್ದೇವೆ ಈಗ ಕಂತು ಕಟ್ಟಲೇಬೇಕು. ಅದಕ್ಕಾಗಿ ಅಕ್ರಮ ಮಾಡಬೇಕಾಗಿದೆ. ಸರ್ಕಾರ ಸರಿಯಾದ ನಿರ್ಣಯ ತೆಗೆದುಕೊಂಡರೆ ನಾವು ಗೌರವದಿಂದ ವ್ಯವಹಾರ ಮಾಡುತ್ತೇವೆ ಎನ್ನುವ ಲಾರಿ ಮಾಲಿಕರು ಅನೇಕರು ಲಾರಿ ಮಾರಾಟ ಮಾಡಿದ್ದಾರೆ. ನನಗೆ ಈ ಕೇಸುಗಳಿಂದ ಸೋತು ಹೋದೆ ಎನ್ನುವವರು ಇದ್ದಾರೆ. ಇನ್ನು ಕೆಲವರು ಈಗಲೂ ಸ್ವಾಮಿ ಸರ್ಕಾರ ಸರಿಯಾದ ಬಿಲ್ ವ್ಯವಸ್ಥೆ ಮಾಡಲಿ. ನಮ್ಮನ್ನು ಕಳ್ಳರು ಎನ್ನುವುದು ಬೇಡ ನಾವು ನ್ಯಾಯಯುತವಾಗಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ.

ಉದ್ಯೋಗವಕಾಶವಿಲ್ಲದ ಸ್ಥಿತಿಯಲ್ಲಿ ಉದ್ಯೋಗ ಎಂದುಕೊAಡು ಪ್ರಾರಂಭಿಸಿದ ವ್ಯವಹಾರದಲ್ಲಿ ಅವರೇ ಮುಳುಗಿದ್ದಾರೆ. ಒಂದು ಲಾರಿ ಅಥವಾ ಪಿಕಪ್ ಯಾವುದೇ ಆದರೂ ಅದಕ್ಕೆ ಮಾಹಿತಿ ನೀಡಲು ಮುಂದೆ ಒಂದು ಮಾಹÀನ ಇರುತ್ತದೆ. ದಾರಿಯಲ್ಲಿ ಯಾರು ಅಡ್ಡ ಹಾಕುತ್ತಾರೋ ಎಂಬ ಭಯದಲ್ಲಿ ಮೊಬೈಲ್ ಆನ್ ಇಟ್ಟುಕೊಂಡು ಡ್ರೆöÊವರ್‌ಗಳ ಸಂಪರ್ಕದಲ್ಲಿಯೇ ಮರಳು ಸಾಗಾಣಿಕೆ ಮಾಡಬೇಕಾಗಿದೆ. 

ಈ ಅಕ್ರಮ ವ್ಯವಸ್ಥೆಯಲ್ಲಿ ಸರ್ಕಾರ ಬಗೆಹರಿಸಿದರೆ ರಾತ್ರಿ ಕದ್ದು ಸಾಗಾಣಿಕೆ ಮಾಡುವ ಅವಶ್ಯಕತೆಯೇ ಇರುವುದಿಲ್ಲ. ರಾತ್ರಿ ಎಂದರೆ ಕೆಲಸಗಾರರ ಸಮಸ್ಯೆ ಹೆಚ್ಚುವರಿ ಸಂಬಳ ಹೆಂಡ ಎಲ್ಲಾ ಸೇರಿ ಮರಳಿನ ದರ ಹೆಚ್ಚಾಗಿದೆ ಎನ್ನುತ್ತಾರೆ. ಮರಳು ವ್ಯವಹಾರದಲ್ಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ. ಅವರ ದುಡಿಮೆಯ ಮಾರ್ಗವನ್ನು ನ್ಯಾಯಯುತವಾಗಿ ಮಾಡಲು ಅವಕಾಶ ನೀಡಿ ಎನ್ನುತ್ತಿದ್ದಾರೆ.

ಗ್ರಾಮಪಂಚಾಯತಿಗೆ ಅಧಿಕಾರ

ಇನ್ನು ಸರ್ಕಾರ ಇತ್ತೀಚೆಗೆ ಗ್ರಾಮ ಪಂಚಾಯತಿಗಳಿಗೆ ಮರಳು ನಿರ್ವಹಣೆ ಅಧಿಕಾರ ನೀಡುತ್ತೇನೆ ಎಂದಿದ್ದಾರೆ. ಈ ಬಗ್ಗೆ ಇನ್ನು ನಿರ್ಣಯ ಅಂತಿಮವಾಗಿಲ್ಲ. ಒಂದು ಗ್ರಾಮ ಪಂಚಾಯತಿಗೆ ಅಧಿಕಾರ ನೀಡಿದರೆ ಅಲ್ಲಿ ಅನೇಕ ಸಮಸ್ಯೆಗಳು ಬರುತ್ತದೆ. ಗ್ರಾಮ ಪಂಚಾಯತಿಗಳಲ್ಲಿ ತೂಕದ ಯಂತ್ರ ಬೇಕಾಗುತ್ತದೆ. ಅದನ್ನು ಅಳವಡಿಸಲು ಒಂದೊAದು ಗ್ರಾಮ ಪಂಚಾಯತ್ ೧೦ಲಕ್ಷ ಬೇಕಾಗಬಹುದು. ಅದನ್ನು ಅಳವಡಿಸಲು ಜಾಗ ಬೇಕು. ನಿರ್ವಹಣೆಗೆ ಜನಬೇಕು. ಎಲ್ಲಾ ಗೊಂದಲಗಳೇ ತುಂಬಿಕೊAಡಿದೆ.

ಇಡೀ ರಾಜ್ಯಕ್ಕೆ ಒಂದೇ ಮರಳು ನೀತಿ ತರಲು ಸಾಧ್ಯವಿಲ್ಲ ಏಕೆಂದರೆ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗುತ್ತದೆ. ಅಲ್ಲಿ ಮರಳಿನ ಸಂಗ್ರಹ ಇರುವುದಿಲ್ಲ. ಅಲ್ಲಿ ನದಿಪಾತ್ರಗಳನ್ನೇ ಕಡಿದು ತೆಗೆಯುತ್ತಾರೆ. ಅದು ಸಹ ಅಪಾಯಕಾರಿ. ಆದ್ದರಿಂದ ಪ್ರತಿ ಜಿಲ್ಲೆಗಳು ತಮ್ಮದೇ ಆದ ಮರಳು ನಿಯಮಗಳನ್ನು ಅಳವಡಿಸಿಕೊಳ್ಳುವ ನಿರ್ಣಯವನ್ನು ಸರ್ಕಾರ ಮಾಡುವುದು ಒಳ್ಳೆಯದು. ಇನ್ನಾದರೂ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಸೇರಿ ಈ ಸಮಸ್ಯೆಗೆ ಒಂದು ಉತ್ತಮ ಮಾರ್ಗ ಕಂಡುಕೊಳ್ಳುತ್ತಾರೋ ಕಾದು ನೋಡಬೇಕು.

Post a Comment

Previous Post Next Post